ಕೇಸರಿ 3

ಮರಾಠಿಯ ರಾಷ್ಟ್ರೀಯ ದಿನಪತ್ರಿಕೆ. ಪುಣೆಯಿಂದ ಪ್ರಕಟವಾಗುತ್ತದೆ. ಪ್ರಾರಂಭದಿಂದಲೂ ಮರಾಠಿಗರ ಆಸೆ ಆಕಾಂಕ್ಷೆಗಳ ಕನ್ನಡಿಯೆನಿಸಿದೆ. ಲೋಕಮಾನ್ಯ ಟಿಳಕರು ಕೇಸರಿಯ ಮುಖಾಂತರ ಮರಾಠಿಗರಲ್ಲಿ ಮಾತ್ರವಲ್ಲ, ಭಾರತದಾದ್ಯಂತ ರಾಜಕೀಯ ಚೇತನವನ್ನು ಮೂಡಿಸಲು ಶ್ರಮಿಸಿದರು. ಸರಳ ಮತ್ತು ನೇರಶೈಲಿಯಲ್ಲಿ ರಾಜಕೀಯ ಮತ್ತು ಇತರ ವಿಚಾರಗಳನ್ನು ಸಾದರಪಡಿಸಿ ಜನಮನವನ್ನು ಕೆರಳಿಸಲು ಅವರು ನಡೆಸಿದ ಪ್ರಯೋಗ ಸಫಲವಾಯಿತು. ಬ್ರಿಟಿಷರ ವಿರುದ್ಧ ಭಾರತೀಯರನ್ನು ಬಡಿದೆಬ್ಬಿಸುವಲ್ಲಿ ಅದು ಸಮರ್ಥ ಸೇವೆ ಸಲ್ಲಿಸಿತು. ಸ್ವರಾಜ್ಯ ತಮ್ಮ ಜನ್ಮಸಿದ್ಧ ಹಕ್ಕು ಎಂಬ ಲೋಕಮಾನ್ಯ ಟಿಳಕರ ಘೋಷಣೆಯನ್ನು ಅದು ಎತ್ತಿಹಿಡಿಯಿತು. ಅದನ್ನು ಪ್ರಚುರಪಡಿಸಿತು. 

ಬಾಲಗಂಗಾಧರ ಟಿಳಕರು ವಿಶ್ವನಾಥಶಾಸ್ತ್ರಿ, ಬಿ.ಕೆ.ಚಿಪಳೂಣಕರ, ಜಿ.ಜಿ.ಅಗರಕರ ಅವರೊಂದಿಗೆ ಸೇರಿ 1881ರ ಜನವರಿ 4 ರಂದು ಕೇಸರಿ ಪತ್ರಿಕೆಯನ್ನು ಪ್ರಾರಂಭಿಸಿದರು. ಪತ್ರಿಕೆಯ ನಿರ್ವಹಣೆಗಾಗಿ ಕೇಸರಿ ಮರಾಠಾ ಟ್ರಸ್ಟ್ ಎಂಬ ಸಂಸ್ಥೆಯ ಸ್ಥಾಪನೆಯಾಯಿತು. ಅಗರಕರ, ತಿಲಕ, ಚಿಪಳೂಣಕರ, ಜಿ.ಕೆ.ಗರ್ದೆ, ಎಂ.ಬಿ.ನಾಮಜೊಶಿ, ವಿ.ಎಸ್.ಆಪ್ಟೆ ಇವರು ಸಂಸ್ಥಾಪಕ ಮಂಡಳಿಯಲ್ಲಿದ್ದರು. ಈಗಲೂ ಈ ಪತ್ರಿಕೆ ಕೇಸರಿ ಮರಾಠ ಟ್ರಸ್ಟ್ ಸಂಸ್ಥೆಯ ಪರವಾಗಿ ನಡೆಯುತ್ತಿದೆ. 
ಪ್ರಾರಂಭದ ಸಂಪಾದಕ ಅಗರಕರ, ಅನಂತರ ಕ್ರಮವಾಗಿ ಲೋಕಮಾನ್ಯ ಟಿಳಕ, ಎನ್.ಸಿ.ಕೇಳಕರ, ಕೆ.ಪಿ.ಖಾಡೀಲಕರ, ಜಿ.ವಿ.ಕೇಡಕರ, ಜೆ.ಪಿ.ಕರಂದೀಕರ, ವಿ.ಕೆ.ಭಾವೆ, ಡಿ.ವಿ.ಗೋಖಲೆ ಜಿ ಎಸ್ ಟಿಳಕ್ ಅವರು ಈ ಪತ್ರಿಕೆಯ ಸಂಪಾದಕತ್ವವನ್ನು ನಿರ್ವಹಿಸಿದರು. ಡಾ. ದೀಪಕ್ ಜಯಂತ್ ಟಿಳಕ್ ಈಗಿನ ಸಂಪಾದಕ. 
ಕೇಸರಿ ವಾರಪತ್ರಿಕೆಯಾಗಿ ಪ್ರಾರಂಭವಾಯಿತು. ಆಗ 8 ಪುಟಗಳು ಇರುತ್ತಿದ್ದವು. ಬೆಲೆ ಅರ್ಧಾಣೆ. ಪ್ರತಿ ಮಂಗಳವಾರ ಪತ್ರಿಕೆ ಪ್ರಕಟವಾಗುತ್ತಿತ್ತು. 1929ರಲ್ಲಿ ಪುಟಗಳ ಸಂಖ್ಯೆಯನ್ನು 12ಕ್ಕೆ ಹೆಚ್ಚಿಸಲಾಯಿತು. ಅದರ ಜೊತೆಗೆ ಬೆಲೆಯೂ ಒಂದಾಣೆಗೆ ಏರಿತು. ವಾರಕ್ಕೆ ಎರಡು ಸಾರಿ-ಮಂಗಳವಾರ ಮತ್ತು ಶನಿವಾರ- ಪತ್ರಿಕೆ ಪ್ರಕಟವಾಗತೊಡಗಿತು. 1951ರಿಂದ 1962ರ ವರೆಗೆ ವಾರದಲ್ಲಿ ಮೂರುದಿನ-ಮಂಗಳವಾರ, ಶುಕ್ರವಾರ ಮತ್ತು ಭಾನುವಾರ-ಪ್ರಕಟವಾಗುತ್ತಿತು. ಈಗ ಇದು ದಿನಪತ್ರಿಕೆ. ಬೆಳಗ್ಗೆ ಪ್ರಕಟವಾಗುತ್ತದೆ. 	ಕೇಸರಿ ಮುದ್ರಣಕ್ಕೆ ಹೊಸ ಯಂತ್ರೋಪಕರಣಗಳಿಗೆ. ಸ್ಥಳೀಯ, ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಸುದ್ದಿಗಳ ಪ್ರಕಟಣೆಗೆ ಏರ್ಪಾಡಿದೆ. ಅದರ ನಿಲುವು ರಾಷ್ಟ್ರೀಯ. ಜನರಲ್ಲಿ ರಾಷ್ಟ್ರೀಯ ಭಾವನೆ ಪ್ರಚೋದಿಸುವಲ್ಲಿ ರಾಜಕೀಯ ಅನ್ಯಾಯಗಳ ವಿರುದ್ಧ ನಿರ್ಭೀತವಾಗಿ ಬರೆಯುವಲ್ಲಿ, ಆರ್ಥಿಕ ಅಸಮಾನತೆ ನಿವಾರಿಸುವಲ್ಲಿ ಅದು ಮಹತ್ವದ ಪಾತ್ರ ನಿರ್ವಹಿಸುತ್ತಿದೆ.	

 (ಎಸ್.ವಿ.ಪಿ.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ